ತುಲಸೀದಾಸ
	1532-1623. ಹಿಂದಿ ಸಂತ ಕವಿ. ರಾಜಾಪುರದ ಆತ್ಮಾರಾಮ್ ದುಬೆ ಹಾಗೂ ಹುಲಸಿಯವರ ಮಗನಾದ ಈತ ಔಧ್ ಪ್ರಾಂತ್ಯದವ. ಕನೌಜಿ ಬ್ರಾಹ್ಮಣ ಮತಸ್ಥನೆಂದು ಕೆಲವು ಮೂಲಗಳು ತಿಳಿಸಿದರೂ ಈತ ಕೆಳವರ್ಗದ ಕುಟುಂಬದಲ್ಲಿ ಜನಿಸಿದನೆಂದೇ ನಂಬಿಕೆ. ಈತ ತುಂಬ ಕುರೂಪಿಯಾಗಿದ್ದು ಕೆಟ್ಟ ನಕ್ಷತ್ರದಲ್ಲಿ ಹುಟ್ಟಿದುದರಿಂದ ತಂದೆತಾಯಂದಿರ ಪ್ರೀತಿ ವಾತ್ಸಲ್ಯದಿಂದ ವಂಚಿತನಾದ. ಮಾತು ಪಿತಾ ಜಗ್ ಜಾಯಿ ತಜ್ಯೊ ವಿಧಿ ಹೂ ನ ಲಿಖಿ ಕಛು ಭಾಲ್ ಭಾಲಾಯಿ ಎಂಬುದಾಗಿ ತನ್ನ ಬಾಲ್ಯದ ದಿನಗಳ ಬಗೆಗೆ ಈತನೇ ಹೇಳಿದ್ದಾನೆ. ತಂದೆ ತಾಯಿಗಳಿಂದ ದೂರವಾದ ಈತ ಜೀವನೋಪಾಯಕ್ಕಾಗಿ ಮನೆಮನೆಗೆ ಅಲೆದ. ಈ ಸ್ಥಿತಿಯಲ್ಲಿದ್ದಾಗ ಈತನಿಗೆ ನರಹರ್ಯಾನಂದಸ್ವಾಮಿಯಿಂದ ಪಂಚಸಂಸ್ಕಾರ ಪುರಸ್ಸರ ಉಪದೇಶ ಆಯಿತು. ತನ್ನ ಜೀವನದಲ್ಲಿ ಅದ್ಭುತ ಪರಿವರ್ತನೆಯನ್ನು ತಂದ ಗುರುವಿನ ಬಗೆಗೆ ತುಲಸೀದಾಸ ಹೀಗೆ ನೆನಸಿಕೊಂಡಿದ್ದಾನೆ.

ಒಂದೆಹು ಗುರುಪದ್ ಕಂಜ್, ಕೃಪಾಸಿಂಧು ನರ-ರೂಪ-ಹರಿ

ಮಹಾ ಮೋಹ್ ತಮ್ ಪುಂಜ್ ಜಾಸು ವಚನ್ ರತಿಕರ್ ನಿಕರ್

ಮುಂದೆ ಈತ ಶೇಷ ಸನಾತನ ಎಂಬ ಗುರುಗಳ ಬಳಿ ವೇದ, ಪುರಾಣ, ಶಾಸ್ತ್ರ, ಇತಿಹಾಸ, ಕಾವ್ಯಗ್ರಂಥಗಳನ್ನು ಆಳವಾಗಿ ಅಧ್ಯಯನ ಮಾಡಿದ.

ತುಲಸೀದಾಸನ ಬದುಕಿನಲ್ಲಿ ಈತನ ವಿವಾಹಕ್ಕೊಂದು ವಿಶೇಷವಾದ ಮಹತ್ತ್ವವುಂಟು. ಪತ್ನಿ ರತ್ನಾವಲಿ, ತುಂಬ ರೂಪವಂತೆ. ಒಮ್ಮೆ ಆಕೆ ತೌರು ಮನೆಗೆ ಹೋಗಿದ್ದಳು. ಆಕೆಯ ಮೇಲಿನ ಮೋಹದಿಂದ ತುಲಸೀದಾಸ ರಾತ್ರಿ ಎಂಬುದನ್ನೂ ಮರೆತು ತುಂಬು ಪ್ರವಾಹದಲ್ಲಿದ್ದ ಯಮುನಾ ನದಿಯಲ್ಲಿ ಈಜಿ ಮತ್ತೊಂದು ದಡದ ಮೇಲಿದ್ದ ಪತ್ನಿಯ ಊರಿಗೆ ಹೋಗಿ ಆಕೆಯನ್ನು ಕಂಡನಂತೆ. ಪತಿಯ ಈ ಹುಚ್ಚಿನಿಂದ ಬೇಸತ್ತ ಆಕೆ ಹಾಡ್-ಮಾಸ್ ಕಿ ದೇಹ್ ಮಮ್‍ತಾಪರ್‍ಜಿತನೀ ಪ್ರೀತೀ ತಿಸು ಆಧೀ ಜೋ ರಾಮ್ ಪ್ರತಿ, ಅವಸಿ ಮಿಟಹಿ ಭವ್ ಭೀತಿ (ಮೂಳೆ-ಮಾಂಸ ತುಂಬಿದ ಶರೀರದ ಮೇಲೆ ಇರುವ ಪ್ರೀತಿಯಲ್ಲಿ ಅರ್ಧವಾದರೂ ರಾಮನ ಮೇಲಿದ್ದರೆ . . .) ಎಂದು ಹೇಳಿದಳಂತೆ. ಪತ್ನಿಯ ಮಾತುಗಳಿಂದ ತುಲಸೀದಾಸನ ಹೃದಯ ಪರಿವರ್ತನೆಗೊಂಡು ಭಕ್ತಿ-ವೈರಾಗ್ಯದತ್ತ ತಿರುಗಿತು ಎನ್ನಲಾಗಿದೆ. ಅಲ್ಲಿಂದ ಮುಂದೆ ಮನೆ ಬಿಟ್ಟು ರಾಮನ ದರ್ಶನಕ್ಕಾಗಿ ಹೊರಟ ತುಲಸೀದಾಸ ಚಿತ್ರಕೂಟ, ಅಯೋಧ್ಯೆ ಕಾಶಿ ಮುಂತಾದ ಸ್ಥಳಗಳಲ್ಲಿ ಸಂಚರಿಸಿ ಅಪಾರವಾದ ಅನುಭವ ಪಡೆದುಕೊಂಡ. ಈ ವ್ಯಾಪಕ ಅನುಭವ, ಗಾಢವಾದ ಪಾಂಡಿತ್ಯ ತೀಕ್ಷ್ಣವಾದ ವಿಮರ್ಶಕ ಬುದ್ಧಿ, ದ್ರಷ್ಟಾರನ ದೂರದೃಷ್ಟಿ, ಯುಗಪ್ರಜ್ಞೆ - ಇವುಗಳಿಂದ ಮೂಡಿ ಬಂದಿರುವ ಈತನ ರಚನೆಗಳು ಹಿಂದೀ ಸಾಹಿತ್ಯದ ಅಮೂಲ್ಯ ನಿಧಿಗಳು.

ತುಲಸೀದಾಸನ ಹೆಸರಿನಲ್ಲಿ ಹತ್ತಾರು ಕೃತಿಗಳು ಸಿಗುವುದಾದರೂ ರಾಮ ಲಲಾನಹಛೂ (1559), ರಮಾe್ಞÁ ಪ್ರಶ್ನ (1564), ಜಾನಕೀಮಂಗಲ (1568), ರಾಮಚರಿತಮಾನಸ (1574), ಪಾರ್ವತೀಮಂಗಲ (1584), ಗೀತಾವಲಿ (1609), ಕೃಷ್ಣ ಗೀತಾವಲಿ (1601), ವಿನಯಪತ್ರಿಕಾ (1601) ಬರವೈ ರಾಮಾಯಣ, ದೋಹಾವಲಿ, ಕವಿತಾವಲೀ, ಹನುಮನ್ನಾಟಕ - ಇವು ಈತನ ಕೃತಿಗಳೇ ಎಂಬುದರಲ್ಲಿ ಸಂದೇಹವಿಲ್ಲ.

ಸಂಸ್ಕøತದಲ್ಲಿ ಮಹಾಪಂಡಿತನಾದರೂ ತುಲಸೀದಾಸ ಜನಭಾಷೆಯಲ್ಲಿಯೇ ಕಾವ್ಯ ರಚಿಸಿದ. ಹಿಂದಿಯ ಉಪಭಾಷೆಗಳಾದ ಅವಧಿ ಹಾಗೂ ವ್ರಜಭಾಷೆಯನ್ನು ತನ್ನ ಅದ್ಭುತ ಪ್ರತಿಭೆಯಿಂದ ಶ್ರೀಮಂತಗೊಳಿಸಿದ. ರಾಮಚರಿತ ಮಾನಸವನ್ನು ಅವಧಿ ಭಾಷೆ ಹಾಗೂ ವಿನಯ ಪತ್ರಿಕಾವನ್ನು ವ್ರಜಭಾಷೆಯ ಪ್ರಾತಿನಿಧಿಕ ಕಾವ್ಯಗಳಾಗಿ ಹೆಸರಿಸಬಹದು.

ತುಲಸೀದಾಸನ ಕಾವ್ಯಗಳಲ್ಲಿ ಅತ್ಯಂತ ಶ್ರೇಷ್ಠವೂ ಪ್ರಸಿದ್ಧವೂ ಆದುದು ರಾಮಚರಿತಮಾನಸ. ಇದು ಹಿಂದೀ ಸಾಹಿತ್ಯದಲ್ಲಷ್ಟೇ ಅಲ್ಲ ವಿಶ್ವಸಾಹಿತ್ಯದಲ್ಲೂ ಉಲ್ಲೇಖಿಸಬಹುದಾದಂಥ ಮೇರುಕಾವ್ಯ. ಇದು ಮಧ್ಯಯುಗದ ಭಾರತೀಯ ಇತಿಹಾಸವನ್ನು ಮಾರ್ದನಿಸುವ, ಸಮಕಾಲೀನ ಇತಿಹಾಸವನ್ನು ಧಾರ್ಮಿಕ ಸಂಘರ್ಷವನ್ನು ಪ್ರತಿಫಲಿಸುವ ಸಾಪೇಕ್ಷೀಯ ಕಾವ್ಯ. ಹಿಂದೂ ಧರ್ಮ, ಹಿಂದೂ ಸಂಸ್ಕøತಿ ಸಂಪೂರ್ಣವಾಗಿ ಲುಪ್ತವಾಗುತ್ತಿದ್ದ ಆ ದಿನಗಳಲ್ಲಿ ತುಲಸೀದಾಸನ ಈ ಕೃತಿ ಭಾರತೀಯ ಸಂಸ್ಕøತಿಯನ್ನು ಪುನರುಜ್ಜೀವನಗೊಳಿಸಿತು ಎಂದು ಹೇಳಬಹುದು.

ರಾಮಚರಿತಮಾನಸದಲ್ಲಿ ಚಿತ್ರಿತವಾಗಿರುವ ರಾಮ ತನ್ನ ಸಮಾಜದ ಎಲ್ಲ ಸಂವೇದನೆಗಳಿಗೆ ಸ್ವರ ನೀಡಿರುವ ಮಹಾಮಾನವ. ಮಾನವೀಯತೆಯ ಸಾಕಾರ ಮೂರ್ತಿಯ ರೂಪದಲ್ಲಿ ರಾಮನನ್ನು ಚಿತ್ರಿಸುವಾಗ ತುಲಸೀದಾಸ ರಾಮನ ಕೋಮಲ ಸ್ವಭಾವ ಹಾಗೂ ಶೀಲಗಳಿಗೆ ಹೆಚ್ಚು ಮಹತ್ತ್ವವನ್ನಿತ್ತಿದ್ದಾನೆ. ದು:ಖಿತರ ದು:ಖ ನಿವಾರಣೆಗೆ, ಪಾಪಿಗಳ ಉದ್ಧಾರಕ್ಕೆ, ಆತ್ಮವಿಶ್ವಾಸಕ್ಕೆ, ಧೈರ್ಯ-ಚೈತನ್ಯಕ್ಕೆ ಮತ್ತೊಂದು ಹೆಸರು ಎಂಬಂತೆ ರಾಮ ಇಲ್ಲಿ ಚಿತ್ರಿತನಾಗಿದ್ದಾನೆ.

ತುಲಸೀದಾಸ ಹಿಂದೀ ಸಾಹಿತ್ಯದ ಭಕ್ತಿಯುಗಕ್ಕೆ ಸಂಪೂರ್ಣ ಜವಾಬ್ದಾರನಾದ ಕವಿ ಎಂಬುದಕ್ಕೆ ಮಾನಸದಲ್ಲಿ ಪ್ರತಿಪಾದಿಸಲ್ಪಟ್ಟಿರುವ ಆದರ್ಶ, ಸಮನ್ವಯಗೊಳಿಸಲ್ಪಟ್ಟಿರುವ ಸಿದ್ಧಾಂತಗಳು ಸಾಕ್ಷಿಯಾಗಿವೆ. ಸಗುಣ-ನಿರ್ಗುಣ, e್ಞÁನ-ಭಕ್ತಿಗಳ ಸಮನ್ವಯ ಮಾಡಿ ಅಂದಿನ ಅನೇಕ ವಿಲೋಮ ಸಮಸ್ಯೆಗಳನ್ನು ಬಗೆಹರಿಸಲು ಈತ ಪ್ರಯತ್ನಿಸಿದ. ಮಾನಸದಲ್ಲಿ ಈತ ಚಿತ್ರಿಸಿರುವ ಕಾವ್ಯಾತ್ಮಕ ಪ್ರಸಂಗಗಳು ಒಂದು ದೃಷ್ಟಿಯಲ್ಲಿ ಭಾರತೀಯ ಸಂಸ್ಕøತಿಯ ಅಂಗಗಳೆಂಬ ರೀತಿಯಲ್ಲಿವೆ. ಈತನ ಪಾತ್ರಸೃಷ್ಟಿಯಲ್ಲಿ ಒಂದು ಬಗೆಯ ನಾವೀನ್ಯ. ಜೀವಂತಿಕೆ, ಮಾನವೀಯ ರೂಪಗಳನ್ನು ಕಾಣಬಹುದಾಗಿದೆ. ಭರತ, ರಾಮ, ಅಹಲ್ಯೆ, ಶಬರಿಯ ಪಾತ್ರಗಳ ಆದರ್ಶದ ಒಂದು ಎಲ್ಲೆಯಾದರೆ ಹನುಮಂತ ಭಕ್ತಿಗೆ ಮತ್ತೊಂದು ಎಲ್ಲೆಯಾಗಿದ್ದಾನೆ. ಆದ್ದರಿಂದಲೇ ಇದು ಭಾರತೀಯ ಜನ ಮಾನಸದ ಪೂಜ್ಯ ಗ್ರಂಥವಾಗಿದೆ.

ವಿನಯ ಪತ್ರಿಕಾ ಒಬ್ಬ ಭಕ್ತನ ಹೃದಯಾಂತರಾಳದಿಂದ ಪುಟಿದು ಬಂದಿರುವ ಗೀತೆಗಳ ಸಂಗ್ರಹ. ರಾಮನ ಸನ್ನಿಧಿಗೆ ನಿವೇದಿಸಿದ ಪ್ರಾರ್ಥನೆಗಳ ರೂಪದಲ್ಲಿವೆ. ಇದರಲ್ಲಿ ಒಟ್ಟು 279 ಗೀತೆಗಳಿದ್ದು ಎಲ್ಲವೂ ಗೇಯ ಗುಣದಿಂದ ಕೂಡಿವೆ. ಭಾಷಾಪ್ರೌಢಿಮೆ, ವಿಚಾರಗಳ ಔನ್ನತ್ಯ, ಅಸಾಧಾರಣ ಕವಿಪ್ರತಿಭೆಯನ್ನು ಈ ಕೃತಿಯಲ್ಲಿ ಗುರುತಿಸಬಹುದು. ದಾಸ್ಯಭಕ್ತಿಯ ಪರಕಾಷ್ಠತೆ ಇಲ್ಲಿನ ಕವಿತೆಗಳಲ್ಲಿನ ಮತ್ತೊಂದು ವಿಶೇಷತೆ.

ಕವಿತಾವಲೀಯಲ್ಲಿನ 369 ಗೀತೆಗಳಲ್ಲಿ ತುಲಸೀದಾಸನ ಕಾವ್ಯಜೀವನದ ಆರಂಭದ ದಿನಗಳಿಂದ ಹಿಡಿದು ಕೊನೆಯ ದಿನಗಳ ವರೆಗಿನ ರಚನೆಗಳು ಸಂಗ್ರಹಗೊಂಡಿವೆ. ಕೃಷ್ಣ ಗೀತಾವಲಿ ಈತನ ಮತ್ತೊಂದು ಪ್ರಮುಖ ಗ್ರಂಥ. ಇದರಲ್ಲಿ ಶ್ರೀಕೃಷ್ಣನ ಬಾಲ್ಯ, ಯೌವನಕ್ಕೆ ಸಂಬಂಧಿಸಿದ 61 ಗೀತೆಗಳಿವೆ.								(ಎಂ.ಆರ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ